ಕೆನಡ ಬಾಲ್ಸಂ

ಕೋನಿಫೆರೇಲ್ಸ್ ಗಣಕ್ಕೆ ಸೇರಿದ ಏಬಿಸ್ ಬಾಲ್ಸಾಮಿಯ ಎಂಬ ಅನಾವೃಬೀಜ ಮರದಿಂದ ಸ್ರಮಿಸುವ ಒಂದು ಬಗೆಯ ತೈಲಮಿಶ್ರಿತ ರಾಳ (ಓಲಿಯೋ-ರೆಸಿóನ್). ಈ ಮರ ಕೆನಡದಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಕಾಂಡದಲ್ಲಿ ತೊಗಟೆ ಮತ್ತು ಕಾಷ್ಠದ ಮಧ್ಯೆ ಇರುವ ಕೆಲವು ವಿಶಿಷ್ಟ ಬಗೆಯ ನಾಳಗಳಲ್ಲಿ ರಾಳ ಇರುತ್ತದೆ. ಇದನ್ನು ಮರಗಳ ಮೇಲೆ ಕಚ್ಚುಗಾಯ ಮಾಡಿ ಹೊರತೆಗೆಯಲಾಗುತ್ತದೆ. ವಾರ್ಷಿಕ ಉತ್ಪತ್ತಿ ಮರವೊಂದಕ್ಕೆ 10 ಔನ್ಸು. ಒಂದು ಮರದಿಂದ ಎರಡು ವರ್ಷ ರಾಳ ತೆಗೆದು ಒಂದು ವರ್ಷ ವಿಶ್ರಾಂತಿ ಕೊಡುವುದು ವಾಡಿಕೆ. ಕೆನಡ ಬಾಲ್ಸಂ ನಸುಹಳದಿ ಬಣ್ಣದ ಸ್ನಿಗ್ಧ ಗುಣವುಳ್ಳ ಪಾರದರ್ಶಕ ದ್ರವ. ಇದಕ್ಕೆ ಒಂದು ಬಗೆಯ ಹಿತಕರವಾದ ವಾಸನೆಯೂ ಕಟುವಾದ ರುಚಿಯೂ ಉಂಟು. ಸೀಸೆಗಳಲ್ಲಿಟ್ಟರೆ ಆರುವುದು ನಿಧಾನ. ಗಾಳಿಯ ಸಂಪರ್ಕಕ್ಕೆ ಬಂದರೆ ಕೊಂಚಕಾಲದಲ್ಲೆ ಒಣಗಿ ಗಟ್ಟಿಯಾಗುತ್ತದೆ. ನೀರಿನಲ್ಲಿ ಕರಗದು. ಆಲ್ಕೊಹಾಲ್, ಕ್ಸೈಲೀನ್, ಬೆಂಜೀನ್, ಕ್ಲೋರೋಫಾರಂ, ಈಥರ್ ಮುಂತಾದುವುಗಳಲ್ಲಿ ಸುಲಭವಾಗಿ ಕರಗುತ್ತದೆ. ಕೆನಡ ಬಾಲ್ಸಂನಲ್ಲಿ 24%ಚಂಚಲ ತೈಲವೂ 50% ಕೆನಡಿನೋಲಿಕ್ ಆಮ್ಲವೂ 13% ಕೆನಡಿನಿಕ್ ಆಮ್ಲವೂ 11-12% ರೆಸೀóನ್ ಎಂಬ ವಸ್ತುವೂ ಇವೆ. ಕೆನಡ ಬಾಲ್ಸಮಿನ ರಿಫ್ರೇಕ್ಷಣಾಂಕ ಗಾಜಿನದರಷ್ಟೆ ಇದೆ. ಇದನನು ಗಾಜು ಮತ್ತು ಮಸೂರಗಳನ್ನು ಅಂಟಿಸುವ ಪದಾರ್ಥವಾಗಿಯೂ ಸೂಕ್ಷ್ಮದರ್ಶಕದ ಪರೀಕ್ಷಾಫಲಕದ ಮೇಲೆ ವಸ್ತುಗಳನ್ನು ನೆಲೆಗೊಳಿಸಲೂ ಉತ್ತಮ ದರ್ಜೆಯ ಅರಗಿನ ಮೆರುಗು ದ್ರವ್ಯದ (ಲ್ಯಾಕರ್) ತಯಾರಿಕೆಯಲ್ಲೂ ಬಳಸುತ್ತಾರೆ.    

                  (ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ